Pages

ಸಂಭ್ರಮದಿ ಜರುಗಿದ ಕುಂದೇಶ್ವರ ಲಕ್ಷದೀಪೋತ್ಸವ

ಕುಂದಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಕುಂದೇಶ್ವರ ದೇವಸ್ಥಾನದ ಲಕ್ಷದೀಪೋತ್ಸವಕ್ಕೆ ಶುಕ್ರವಾರ ಅದ್ದೂರಿಯ ಚಾಲನೆ ದೊರಕಿದೆ. ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು. 

 


ಸಂಜೆ ಲಕ್ಷದೀಪೋತ್ಸವ ಪ್ರಯುಕ್ತ ಅಸಂಖ್ಯ ಭಕ್ತರು ಕುಂದೇಶ್ವರ ದೇವರಿಗೆ ಹಣತೆ ದೀಪ ಬೆಳಗಿ ದೇವರ ದರ್ಶನ ಪಡೆದರು. ವಿಶೇಷ ಪೂಜಾವಿಧಿ ನಡೆದವು. ದೇವಳದ ಪುಷ್ಪ ರಥೋತ್ಸವಕ್ಕೆ ಹಾಗೂ ಶ್ರೀ ದೇವರ ಕಟ್ಟೆಪೂಜೆ ಚಾಲನೆ ನೀಡಲಾಯಿತು.ಕುಂದಾಪುರ ನಗರ ದೀಪಾಲಂಕಾರದಿಂದ ಶೋಭಾಯಮಾನವಾಗಿದೆ. ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮ ದೀಪೋತ್ಸವದ ಮೆರಗು ಹೆಚ್ಚಿಸಿದೆ.

ಕುಂದಾಪುರ ವರ್ಣನೈಸ್ ಪ್ರಿಂಟ್ಸ್ ಹಾಗೂ ಉಡುಪಿ ಕಿದಿಯೂರು ಹೋಟೆಲ್ ಆಶ್ರಯದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಅನ್ನಸಂತರ್ಪಣೆಗಾಗಿ ಅಕ್ಕಿ ಸೇವೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ದೇವಳದ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರೀ ಕುಂದೇಶ್ವರ ದೇವರ ಭಾವಚಿತ್ರವಿರುವ 2015ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ವರ್ಣನೈಸ್ ಪ್ರಿಂಟ್ಸ್ ಕುಂದಾಪುರ ಮಾಲೀಕ ಜಿತೇಶ್ ಕಿದಿಯೂರು, ಕಿದಿಯೂರು ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು, ಹೀರಾ ಬಿ. ಕಿದಿಯೂರು, ಭವ್ಯಶ್ರೀ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ರಾಘವೇಂದ್ರ ನಾವಡ, ರಾಜಗೋಪಾಲ ಹೊಳ್ಳ, ಶೋಭಾ ಮಧ್ಯಸ್ಥ ಉಪಸ್ಥಿತರಿದ್ದರು. 

ಕೃಷಿ ಉಳಿವಿಗೆ ಸಾವಯವ ಬಳಕೆಗೆ ಉತ್ತೇಜನ: ಗೋಪಾಲ ಪೂಜಾರಿ

ಬೈಂದೂರು: ಕೃಷಿಕರು ರಾಸಾಯನಿಕ ಗೊಬ್ಬರದ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಇದರಿಂದ ಕಾಲಕ್ರಮೇಣ ಭೂಮಿಯ ಫಲವತ್ತತೆ ಕಡಿಮೆಯಾಗುವುದಲ್ಲದೆ, ಇದನ್ನು ದುಬಾರಿ ಬೆಲೆ ತೆತ್ತು ಖರೀದಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾವಯವ ಬಳಕೆಗೆ ಉತ್ತೇಜನ ನೀಡುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. 

ತಗ್ಗರ್ಸೆ ಗ್ರಾಮದ ಚಂದಣದ ಸೋಮಲಿಂಗೇಶ್ವರ ದೇವಳದ ವಠಾರದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಕುಂದಾಪುರ ಹಾಗೂ ಪ್ರಕತಿ ಸಾವಯವ ಭಾಗ್ಯ ಸಮಿತಿ ಜಂಟಿ ಆಶ್ರಯದಲ್ಲಿ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಗ್ರಾಪಂ ಅಧ್ಯಕ್ಷ ಜನಾರ್ದನ ಬಾಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ರಾಜು ಪೂಜಾರಿ, ಕೃಷಿ ಉಪ ನಿರ್ದೇಶಕ ಚಂದ್ರ ಶೇಖರ ನಾಯಕ್ ಪುರುಷೋತ್ತಮ, ಬೈಂದೂರು ಕೃಷಿ ಅಧಿಕಾರಿ ಗಾಯತ್ರಿ ದೇವಿ ಉಪಸ್ಥಿತರಿದ್ದರು. 

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಧನಂಜಯ, ಆವರ್ಸೆ ಪ್ರಗತಿಪರ ಕೃಷಿಕ ಕೃಷ್ಣ ಕುಲಾಲ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಾವಯವ ಭಾಗ್ಯ ಸಮಿತಿ ಅಧ್ಯಕ್ಷ ತಿಮ್ಮಣ್ಣ ಹೆಗ್ಡೆ ಸ್ವಾಗತಿಸಿದರು.

ಕಾರ್ಟೂನು ಹಬ್ಬ ಜೋರ್ ಇತ್ತ್... ಕಾಂಬುಕ್ ಬತ್ತಿಲ್ಯಾ?

   ಇಂದು ಕುಂದಾಪುರದವರಿಗೆ ಎರಡೆರಡು ಹಬ್ಬಗಳು. ಒಂದೆಡೆ ಕುಂದೇಶ್ವರ ದೀಪೋತ್ಸವದ ಸಂಭ್ರಮ. ಮತ್ತೊಂದೆಡೆ ಜ್ಯೂನಿಯರ್ ಕಾಲೇಜು ಕಲಾಮಂದಿರದಲ್ಲಿ ಕುಂದಾಪ್ರ ಕಾರ್ಟೂನು ಹಬ್ಬ. ದೀಪೋತ್ಸವದಿಂದಾಗಿ ಕುಂದಾಪುರದ ನಗರವೇ ಸಿಂಗಾರಗೊಂಡಿದ್ದರೇ, ಕಾರ್ಟೂನ್ ಹಬ್ಬ ಕಲಾಮಂದಿರಲ್ಲಿ ಒಂದು ವಿಶಿಷ್ಟಲೋಕವನ್ನೇ ತೆರೆದಿಟ್ಟಿದೆ. 

   ಕಲಾಮಂದಿರದ ಎದುರಿಗೇ ವಿರಾಟ್ ಕೊಹ್ಲಿ, ಸಚಿನ್ ತಂಡೂಲ್ಕರ್ ನಿಮ್ಮನ್ನು ಕಾರ್ಟೂನು ಹಬ್ಬಕ್ಕೆ ಬರಮಾಡಿಕೊಂಡರೇ, ಒಳಗಡೆ ವಿವಿಧ ರಾಜಕಾರಣಿಗಳು, ನಟರು, ಕ್ರಿಕೆಟಿಗರು ಮುಂತಾದವರ ವಿವಿಧ ಕಾರ್ಟೂನುಗಳ ಪ್ರದರ್ಶನ ನಿಮ್ಮನ್ನು ಪುಳಕಿತರಾಗುವಂತೆ ಮಾಡುತ್ತದೆ.

ಕಾರ್ಟೂನ್ ಕುಂದಾಪ್ರ ಸಂಸ್ಥೆ ಪ್ರಥಮ ಬಾರಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿಭಿನ್ನ ಹಾಗೂ ಅಚ್ಚುಕಟ್ಟಾಗಿ ಮೂಡಿಬಂದಿದೆ. 


 ಮಕ್ಕಳ ಮುಗ್ಧತೆಯನ್ನು ಕಾಪಾಡೋಣ, ಲಂಚಾಸುರನಿಗೆ ತುತ್ತು ತಿನ್ನಿಸಬೇಡಿ, ನೀವು ಮದ್ಯಪಾನರಾದಾಗ ಸೈತಾನ ಡ್ರೈವ್ ಮಾಡ್ತಾನೆ, ಚುಡಾಯಿಸೋದು ಪುರಷತ್ವವಲ್ಲ-ಹೇಡಿತನ ಹೀಗೆ ಹತ್ತು ಹಲವು ಸಾಮಾಜಿಕ ಕಳಕಳಿಯ ಕಾರ್ಟೂನುಗಳುಗಳು ಸತೀಶ್ ಆಚಾರ್ಯ ಅವರ ಕುಂಚದಿಂದ ಒಂದೆಡೆ ಮೂಡಿ ಬಂದಿದ್ದರೇ, ನಾಡಿನ ಪ್ರಖ್ಯಾತ ಪತ್ರಿಕೆ, ವೆಬ್ಸೈಟ್ ಗಳಲ್ಲಿ ಪ್ರಕಟವಾದ ಕುಂದಾಪುರ ಮೂಲದವರ ವಿವಿಧ ಕಾರ್ಟೂನುಗಳು ಇಲ್ಲಿ ಅನಾವರಣಗೊಂಡಿದೆ. 


 ನೀವು ಮಿಸ್ ಮಾಡಿಕೊಳ್ಳಲು ಕಾರಣವೇ ಇಲ್ಲದ ಒಂದು ವಿಶಿಷ್ಟ ಹಬ್ಬಕ್ಕೆ ಸಂಭ್ರಮಿಸಲು ಮರೆಯದೇ ಬನ್ನಿ.

 ಅಂದ ಹಾಗೆ ಸತೀಶ್ ಆಚಾರ್ಯ ಅವರೊಂದಿಗೆ ಕಾರ್ಟೂನಿಷ್ಟಗಳಾದ ಜಯರಾಮ ಉಡುಪ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಹರ್ಳೆ, ದಿನೇಶ್ ಹೊಳ್ಳ, ಗಣೇಶ್ ಹೆಬ್ಬಾರ್ ಮುಂತಾದವರು ಸೇರಿಕೊಂಡಿದ್ದಾರೆ. ವಿದ್ಯಾರ್ಥಿಗಳು, ಕಾರ್ಟೂನ್ ಪ್ರೀಯರು ತಂಡೋಪತಂಡವಾಗಿ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ.  
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com